ಕಾಮೋತ್ತೇಜಕ

ವಿಷಯಾಸಕ್ತಿಯನ್ನೂ ಸಂಭೋಗ ಸಾಮಥ್ರ್ಯವನ್ನೂ ಉದ್ರೇಕಿಸಲು ಉಪಯೋಗಿಸುವ ವಸ್ತು (ಅಫ್ರೆಡಿಸೀóಯಕ್). ಕಾಮೋತ್ತೇಜಕಗಳಲ್ಲಿ ಎರಡು ವಿಧ : ದೈಹಿಕ ಮತ್ತು ಮಾನಸಿಕ ವ್ಯಾಪ್ತಿಯುಳ್ಳ ದೃಷ್ಟಿ, ಗಂಧ, ಸ್ಪರ್ಶ ಮುಂತಾದ ಇಂದ್ರಿಯ ಜ್ಞಾನಗಳ ಉಪಯೋಗವನ್ನು ಪಡೆಯುವವು ; ಆಹಾರಗಳು, ಮೂಲಿಕೆಗಳು, ಔಷಧಗಳು, ಮದ್ಯಸಾರಗಳು ಮತ್ತು ಅನುರತಿಪೇಯಗಳು-ದೇಹದ ಒಳಗೆ ಸೇರಿ ಕೆಲಸ ಮಾಡುವಂಥವು.

ಕಾಮೋತ್ತೇಜಕಗಳನ್ನು ಕುರಿತ ಯಾವುದೇ ವಿಧವಾದ ಶಾಸ್ತ್ರ ಗ್ರಂಥಗಳೂ ಉಪಲಬ್ದವಾಗಿಲ್ಲ. ಜೀವರಾಸಾಯನಿಕವಾಗಿ ಹೇಳುವುದಾದರೆ ಯಾವ ಆಹಾರ ವಸ್ತುವೂ ಕಾಮೋತ್ತೇಜಕವಲ್ಲ. ಹಾಗಿದ್ದರೂ ಆಕಾರ ಸಾಮ್ಯ ರುಚಿವೈವಿಧ್ಯಗಳನ್ನು ಲಕ್ಷಿಸಿ ಮಾನವ ಆಹಾರ ವಸ್ತುಗಳಲ್ಲಿ ಕೆಲವು ಕಾಮೋತ್ತೇಜಕಗಳೆಂದು ಕರೆದು ಹಾಗೆ ನಂಬಿ ಬಳಸುತ್ತ ಬಂದಿದ್ದಾನೆ.

ಕಾಮೋತ್ತೇಜಕ ಆಹಾರವಸ್ತುಗಳ ತಯಾರಿಕೆ ಮನುಷ್ಯನ ಲೈಂಗಿಕ ಚರಿತ್ರೆಯಲ್ಲಿ ಆಗಾಧಪಾತ್ರವಹಿಸಿದೆ ಮತ್ತು ಬಹುಜನಪ್ರಿಯವಾಗಿದೆ. ಏಲಕ್ಕಿ, ತಾಂಬೂಲ ಮುಂತಾದವು ಬ್ರಹ್ಮಚಾರಿಗಳಿಗೆ ವಜ್ರ್ಯವೆಂದೂ ಮೀನು, ಕೆಲವು ತರಕಾರಿಗಳು, ಮಸಾಲೆ ಪದಾರ್ಥಗಳು ಕಾಮೋತ್ತೇಜಕ ಸ್ವಭಾವವುಳ್ಳ ಪದಾರ್ಥಗಳೆಂದೂ ಅನೂಚಾನವಾಗಿ ಗಣಿಸಲ್ಪಟ್ಟಿದೆ. ಆದರೆ ಈ ಯಾವ ಪದಾರ್ಥಗಳೂ ಜನನೇಂದ್ರಿಯಗಳ ಸ್ವಾಭಾವಿಕ ಕಾರ್ಯಗಳ ಮೇಲೆ ನೇರವಾಗಿ ಪರಿಮಾಣವನ್ನುಂಟುಮಾಡಬಲ್ಲ ರಾಸಾಯನಿಕಗಳನ್ನು ಹೊಂದಿಲ್ಲ. ಆದ್ದರಿಂದ ಕಾಮೋತ್ತೇಜಕ ಆಹಾರವೆನ್ನಿಸಿಕೊಳ್ಳುವ ಅವುಗಳ ಪ್ರಖ್ಯಾತಿ ನಿಜಾಂಶವನ್ನಲ್ಲ, ಜನಶ್ರುತಿಯನ್ನು ಆಧರಿಸಿದೆ. ಆದರೂ ಕಾಮೋತ್ತೇಜಕಗಳಲ್ಲಿ ವಿಶ್ವಾಸ ಮುಂದುವರಿಯುತ್ತಲೇ ಇದೆ. ಶತಮಾನಗಳ ಹಿಂದೆ ವಿಜ್ಞಾನ ವಿಚಾರಗಳ ಅಭಾವವಿದ್ದಾಗ ಮತ್ತು ಜನರು ಮೂಲಿಕೆಗಳಿಗೆ ಅವುಗಳ ಅಥವಾ ಅವುಗಳ ಭಾಗಗಳ ಆಕರವಾಗಿರುವ ಅಂಗಗಳ ಮೇಲೆ ಪ್ರಭಾವಿರುವುದೆಂದು ನಂಬಿದ್ದಾಗ ಕಾಮೋತ್ತೇಜಕಗಳು ಈ ಪ್ರಖ್ಯಾತಿಯನ್ನು ಪಡೆದವು. ಹೀಗೆಯೇ ಹೃದಯದ ಆಕರದ ಮೂಲಿಕೆ ಹೃದ್ರೋಗಗಳಿಗೂ ಚೇಳಿನಕೊಂಡಿಯ ಆಕಾರದ ಮೂಲಿಕೆ ಚೇಳು ಕುಟುಕಿಗೂ ಔಷಧಗಳೆಂಬ ನಂಬಿಕೆ ಬೆಳೆದಿದೆ. ಅನೇಕ ವೇಳೆ ಮೂಲಿಕೆಗಳಿಗೆ ಅವುಗಳ ಈ ಹೋಲಿಕೆಯನ್ನು ಗಮನದಲ್ಲಿಟ್ಟುಕೊಂಡೇ ಹೆಸರನ್ನು ಕೊಡಲಾಗಿದೆ. ವ್ಯಾನಿ ಎಂಬ ಮೂಲಿಕೆಗೆ ಆ ಹೆಸರು ಬಂದಿರುವುದು ಸ್ಪ್ಯಾನಿಷ್ ಭಾಷೆಯಲ್ಲಿ ಅದಕ್ಕೆ ಯೋನಿ ಎಂಬ ಅರ್ಥ ಇರುವುದರಿಂದ.

ಆಯುರ್ವೇದದಲ್ಲಿ ಕಾಮೋತ್ತೇಜನಕ್ಕೆ ವಾಜೀಕರಣ ಎನ್ನುತ್ತಾರೆ. ಕುದುರೆಯಂತೆ ಮೈಥುನಶಕ್ತಿ ಪಡೆಯಬಲ್ಲ ಕಾರಣದಿಂದ ಈ ಹೆಸರು ಬಂದಿರಬೇಕು. ಯಾವ ಔಷಧಿ ಮನುಷ್ಯನಿಗೆ ಸಂತಾನವನ್ನು ಕೊಡುವುದೋ ಯಾವುದನ್ನು ಸೇವಿಸಿದರೆ ಕೂಡಲೇ ಇಂದ್ರಿಯಗಳಲ್ಲಿ ಚೈತನ್ಯ ಪ್ರವಹಿಸುವುದೋ ಯಾವುದರಿಂದ ಕೀರ್ತಿ, ಲಕ್ಷ್ಮೀಬಲ, ಪುಷ್ಟಿಗಳು ಲಭ್ಯವಾಗುವುವೋ ಆ ಔಷಧವೇ ವಾಜೀಕರಣ ಎಂದು ಚರಕ ಸಂಹಿತೆಯಲ್ಲಿ ಹೇಳಿದೆ.

ನವೀನ ಔಷಧಶಾಸ್ತ್ರದ ಪ್ರಕಾರ ನಿಜವಾಗಿ ಕಾಮೋತ್ತೇಜಕಗಳೆಂದು ಕರೆಯಬಹುದಾದ ವಸ್ತುಗಳು ಬಹು ವಿರಳ, ಪ್ರಾಯಶಃ ಒಂದು ತರಹ ಕೀಟದಿಂದ ತಯಾರಾದ ಕ್ಯಾಂಥರಿಡೀನ್ ಮತ್ತು ಮಧ್ಯ ಆಫ್ರಿಕದಲ್ಲಿ ಶತಮಾನಗಳಲ್ಲಿ ಹಿಂದಿನಿಂದಲೂ ಇದೇ ಉಪಯೋಗಕ್ಕೆ ಬಳಸುತ್ತಿದ್ದ ಯೋಹಿಂಬೆ ಮರದ ತೊಗಟೆಯಿಂದ ತಯಾರಾದ ಕಾಮೋತ್ತೇಜನ ಬಹುಶಃ ನಂಬಿಕೆ ಮನೋಭಾವದಿಂದಲೇ ಬಂದುದು ಎಂದು ಕಾಣಿಸುತ್ತದೆ. ಏಕೆಂದರೆ ಅವನ್ನು ಅವುಗಳ ವಿಷಗುಣ ವ್ಯಕ್ತವಾಗುವಷ್ಟು ಪ್ರಮಾಣದಲ್ಲಿ ಕೊಟ್ಟರೆ ಮಾತ್ರ ನಿಜವಾಗಿ ಕಾಮೋತ್ತೇಜನ ಉಂಟಾಗುತ್ತದೆ. ಘೇಂಡಾಮೃಗದ ಕೊಂಬು ಕಾಮೋತ್ತೇಜಕವೆಂಬ ನಂಬಿಕೆ ಬಹುಕಾಲದಿಂದಿದ್ದು ಈಚೆಗೆ ಬಹಳವಾಗಿ ಪ್ರಚಾರದಲ್ಲಿದೆ. ಇದರಿಂದಾಗಿ ಘೇಂಡಾಮೃಗದ ಕೊಂಬು ಅದರ ತೂಕದಷ್ಟು ಚಿನ್ನಕ್ಕಿಂತ ಹೆಚ್ಚು ಬೆಲೆಯಾಗಿದ್ದು ಭಾರತದಲ್ಲಿ ಈ ಮೃಗಗಳ ಅವನತಿಗೆ ಕಾರಣವೆನಿಸಿದೆ.

 

(ಎಸ್.ಆರ್.ಆರ್.; ಎಂ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ